ರಸವಿದ್ಯೆ -
 	ಪ್ರತ್ಯಾಮ್ಲ ಲೋಹಗಳನ್ನು ಚಿನ್ನವನ್ನಾಗಿ ದ್ರವ್ಯಾಂತರಿಸುವುದೇ ಪ್ರಧಾನ ಧ್ಯೇಯವಾಗಿದ್ದ ರಸಾಯನವಿಜ್ಞಾನಕ್ಕೆ, ಅದರಲ್ಲೂ ಮುಖ್ಯವಾಗಿ ಪ್ರಾಯೋಗಿಕ ರಸಾಯನವಿಜ್ಞಾನಕ್ಕೆ ಅಡಿಪಾಯವೆನ್ನಲಾಗಿದ್ದ ಪ್ರಾಚೀನ ಪ್ರಯೋಗ ಪಟುಗಳು ತಮ್ಮದೇ ಆದ ವಿಶಿಷ್ಟ ವಿಧಾನಗಳನ್ನು ರೂಪಿಸಿ ಅನುಸರಿಸಿಕೊಂಡು ಬಂದಿದ್ದ ಊಹಾತ್ಮಕ ಅಧ್ಯಯನ ವ್ಯವಸ್ಥೆ (ಆಲ್‍ಕೆಮಿ). ಈ ವ್ಯವಸ್ಥೆಯ ಸಿದ್ಧಹಸ್ತರಿಗೆ ರಸವಾದಿಗಳು (ಆಲ್‍ಕೆಮಿಸ್ಟ್ಸ್) ಎಂದು ಹೆಸರು. ಪ್ರಕೃತಿಯ ವಿಚಾರವಾಗಿ ಖಚಿತ ಮತ್ತು ಯಥಾರ್ಥವಾಗಿರುವ ವಿಷಯ ಸಂಗ್ರಹಕ್ಕಾಗಿ ರಸಾಯನವಿಜ್ಞಾನದ ಅಭ್ಯಾಸ ಸುಮಾರು ಇನ್ನೂರು ವರ್ಷಗಳ ಹಿಂದೆ ಪ್ರಾರಂಭವಾಯಿತಾದರೂ ರಸಾಯನವಿಜ್ಞಾನವನ್ನು ಒಂದು ಕಲೆಯಾಗಿ ಬಹು ಹಿಂದಿನಿಂದಲೂ ಅಭ್ಯಾಸ ಮಾಡಲಾಗುತ್ತಿತ್ತು. ವಿವಿಧ ಲೋಹಗಳ ತಯಾರಿಕೆ ಮತ್ತು ಔಷಧಗಳನ್ನು ಮಾಡುವುದು ಹಿಂದಿವನರಿಗೆ ಆ ಮೊದಲೇ ತಿಳಿದಿತ್ತು. ಹಿಂದೂಗಳೂ ಗ್ರೀಕರೂ ಈಜಿಪ್ಟಿಯನ್ನರೂ ಚೀನಿಯರೂ ಅರಬ್ಬರೂ ರಾಸಾಯನಿಕವಾದ ಎಷ್ಟೋ ನಿಯಮಗಳನ್ನು ಕಂಡುಕೊಂಡಿದ್ದರು. ಅಲ್ಲದೆ ಗ್ರೀಕ್ ಮೇಧಾವಿಗಳು ಸೃಷ್ಟಿ ರಚನೆಯ ವಿಷಯವಾಗಿ ಅನೇಕ ವಾದಗಳನ್ನು ಪ್ರತಿಪಾದಿಸಿದ್ದರು ಕೂಡ. ಅವರ ಪೈಕಿ ಥೇಲ್ಸ್ ಎಂಬಾತ ಈ ಪ್ರಪಂಚ ನೀರಿನಿಂದಾಗಿದೆ ಎಂದು ವಾದಿಸಿದ್ದ. ಅನೆಕ್ಸಿಮೀನ್ಸ್ ಎಂಬ ಗ್ರೀಕ್ ತತ್ತ್ವಜ್ಞ ಎಲ್ಲಕ್ಕೂ ವಾಯುವೇ ಮೂಲ ಎಂದು ತಿಳಿಸಿದ್ದ. ಹಿರಾಕ್ಲಿಟಸ್ ಎಂಬ ದಾರ್ಶನಿಕ ಎಲ್ಲ ವಸ್ತುಗಳು ಅಗ್ನಿಯ ರೂಪಾಂತರ ಮಾತ್ರ ಎಂದೂ ವಾದಿಸಿದ್ದ. ಡೆಮೊಕ್ರಟೀಸ್, ಅರಿಸ್ಟಾಟಲ್ ತತ್ತ್ವಜ್ಞಾನಿಗಳು ಪ್ರಪಂಚದ ಪದಾರ್ಥಗಳೆಲ್ಲ ಸಣ್ಣ ಸಣ್ಣ ಪರಮಾಣುಗಳಿಂದ ರಚಿತವಾಗಿವೆಯೆಂದೂ ಬೇರೆ ಬೇರೆ ಪರಮಾಣುಗಳ ಯೋಜನೆಯೇ ಈ ಪ್ರಪಂಚದಲ್ಲಿ ಕಾಣುವ ವೈವಿಧ್ಯಕ್ಕೆ ಕಾರಣವೆಂದೂ ವಾದಿಸಿದ್ದರು. ಅರಿಸ್ಟಾಟಲ್ ಸಮಸ್ತ ವಸ್ತುಗಳು ಪೃಥ್ವಿ, ಅಪ್ಪು, ತೇಜಸ್ಸು ಮತ್ತು ವಾಯುಗಳೆಂಬ ನಾಲ್ಕು ಮೂಲವಸ್ತುಗಳಿಂದ ಆಗಿವೆಯೆಂದು ಸಾರಿದ್ದ. ಈ ತತ್ತ್ವಗಳು ಯಾವ ಪ್ರಯೋಗಗಳ ಆಧಾರವನ್ನೂ ಅವಲಂಬಿಸಿರಲಿಲ್ಲ. ಕೇವಲ ಊಹೆಗಳಾಗಿದ್ದವು.

	ಈ ಅಭಿಪ್ರಾಯವನ್ನು ಇಟ್ಟುಕೊಂಡ ಅವರು ಒಂದು ಮೂಲವಸ್ತುವನ್ನು ಇನ್ನೊಂದು ಮೂಲವಸ್ತುವಾಗಿ ಪರಿವರ್ತಿಸುವುದು ಸುಲಭಸಾಧ್ಯವೆಂದು ತಿಳಿದುಕೊಂಡಿದ್ದರು. ತಾಮ್ರ ಮತ್ತು ಸತುವನ್ನು ಕೂಡಿಸಿ ಕರಗಿಸಿದಾಗ ಬಂಗಾರದಂಥ ಮಿಶ್ರಣ ತಯಾರಾಗುತ್ತಿದ್ದುದೇ ಇದಕ್ಕೆ ಮುಖ್ಯ ಕಾರಣ. ಕ್ರಿಸ್ತಶಕ ಹದಿಮೂರು ಹದಿನಾಲ್ಕನೆಯ ಶತಮಾನಗಳಲ್ಲಿ ರಸಾಯನ ಕಲೆ ಎಂಬುದು ಗುಪ್ತಕಲೆಯಾಯಿತು. ರಸವಾದಿಗಳೆಂಬ ಒಂದು ಗುಂಪಿನವರು ಅತಿರಹಸ್ಯದಲ್ಲಿ ಈ ಕಲಾಭ್ಯಾಸ ಮಾಡುತ್ತಿದ್ದರು. ಕೆಂಪುಮಣ್ಣನ್ನು ಕೆಲವು ರಾಸಾಯನಿಕ ಕ್ರಿಯೆಗಳಿಂದ ಕಬ್ಬಿಣವಾಗಿ ಪರಿವರ್ತಿಸಬಹುದು ಎಂಬುದನ್ನು ಅವರು ಅರಿತಿದ್ದರು. ಲೋಹಗಳು ಪಾದರಸ ಮತ್ತು ಗಂಧಕಗಳಿಂದ ಆಗಿರುವಂಥವು ಎಂಬ ಭಾವನೆ ಅವರಲ್ಲಿತ್ತು. ಚಿನ್ನ ಮತ್ತು ಬೆಳ್ಳಿಗಳಲ್ಲಿ ಅತ್ಯಂತ ಪರಿಶುದ್ಧವಾದ ಗಂಧಕ ಮತ್ತು ಪಾದರಸಗಳಿವೆಯೆಂದೂ ಇತರ ಲೋಹಗಳಲ್ಲಿ ಶುದ್ಧವಲ್ಲದ ಗಂಧಕ ಮತ್ತು ಪಾದರಸಗಳಿರುವುದೆಂದೂ ತಿಳಿದಿದ್ದರು. ಆದ್ದರಿಂದ ಪಾದರಸವನ್ನೂ ಗಂಧಕವನ್ನೂ ಶುದ್ಧೀಕರಿಸಲು ವಿಶೇಷ ಪ್ರಯತ್ನಗಳನ್ನು ನಡೆಸಿದ್ದರು, ಲೋಹಗಳಲ್ಲಿಯ ಪಾದರಸ ಮತ್ತು ಗಂಧಕಗಳ ಪ್ರಮಾಣಗಳನ್ನು ಬದಲಾಯಿಸುವುದರಿಂದಲೂ ಗಂಧಕವನ್ನು ಶುದ್ಧೀಕರಿಸುವುದರಿಂದಲೂ ಒಂದು ಲೋಹವನ್ನು ಇನ್ನೊಂದು ಲೋಹವಾಗಿ ಪರಿವರ್ತಿಸಬಹುದೆಂದು ತಿಳಿದು ಕೊಂಡಿದ್ದರು. ಕೆಂಪುಮಣ್ಣನ್ನು ಕೆಲವು ರಾಸಾಯನಿಕ ಕ್ರಿಯೆಗಳಿಂದ ಕಬ್ಬಿಣವಾಗಿ ಪರಿವರ್ತಿಸುವ ರೀತಿಯಲ್ಲೇ ತಾಮ್ರ ಸೀಸಗಳನ್ನೂ ಚಿನ್ನ ಅಥವಾ ಬೆಳ್ಳಿಯಾಗಿ ಪರಿವರ್ತಿಸಬಹುದೆಂಬ ನಂಬಿಕೆ ರಸವಾದಿಗಳಲ್ಲಿ ಬೇರೂರಿತ್ತು. ಈ ನಂಬಿಕೆಯೇ ಅವರಲ್ಲಿದ್ದ ಅತಿಯಾದ ರಹಸ್ಯಕ್ಕೆ ಕಾರಣವಾಗಿತ್ತು. ರಸವಾದಿಗಳು ಸಮಸ್ತ ವ್ಯಾಧಿಗಳನ್ನು ಗುಣಮಾಡುವ ಮತ್ತು ವಾರ್ಧಕ್ಯವನ್ನು ತಡೆಗಟ್ಟುವ ಅಮೃತದ ಹಾಗೂ ಕೀಳುಲೋಹಗಳನ್ನು ಸುವರ್ಣವಾಗಿ ಪರಿವರ್ತಿಸುವ ಸ್ಪರ್ಶಶಿಲೆಯ (ಪರುಷಶಿಲೆ) ಅನ್ವೇಷಣೆಯಲ್ಲಿ ನಿರತರಾಗಿದ್ದರು. ಅಧಿಕ ಧನಾರ್ಜನೆಗಾಗಿ ಕೀಳು ಲೋಹಗಳನ್ನು ಬಂಗಾರವಾಗಿ ಪರಿವರ್ತಿಸುವ ಅವರ ಈ ಪ್ರವೃತ್ತಿ ಹೆಚ್ಚಾಗಿ ಬೆಳೆದುಬಂತು. ವೈದ್ಯಕೀಯ ಮತ್ತು ರಸಾಯನವಿಜ್ಞಾನಗಳ ನಿಕಟ ಸಂಬಂಧ ಉಂಟಾಗಿ ಈ ಶಾಸ್ತ್ರಜ್ಞರಲ್ಲಿ ಅಂಧಶ್ರದ್ಧೆ ಇಂದ್ರಜಾಲ ಮೊದಲಾದ ಭಾವನೆಗಳು ಹೆಚ್ಚಾಗಿ ಬಲಗೊಂಡವು. ಹದಿನಾಲ್ಕನೆಯ ಶತಮಾನದ ಪ್ರಸಿದ್ಧ ರಸವಾದಿ ರೇಮಂಡ್‍ಲಲ್ಲಿ ಎಂಬವ ಲಂಡನ್ನಿನಲ್ಲಿ ಇದ್ದಾಗ ಅಲ್ಲಿಯ ರಾಜ ಮೊದಲನೆಯ ಎಡ್ವರ್ಡನಿಗೆ 50 ಸಾವಿರ ಪೌಂಡು ಪಾದರಸವನ್ನು ಬಂಗಾರವಾಗಿ ಪರಿವರ್ತಿಸಿ ಕೊಟ್ಟನೆಂಬ ಒಂದು ಕತೆಯೂ ಇದೆ.

	ರಸವಿದ್ಯೆಯ ಉಗಮಸ್ಥಾನ ಚೀನ ಎಂಬ ಭಾವನೆಯಿದೆ. ಕ್ರಿ. ಪೂ. 3ನೆಯ ಶತಮಾನದ ಅಲ್ಲಿಯ ಸಾಹಿತ್ಯದಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ನಾಲ್ಕನೆಯ ಶತಮಾನದ ಚೀನೀ ದಾರ್ಶನಿಕರ ಪೈಕಿ ಒಬ್ಬನಾದ ತಾವೋಸ್ಟ್‍ಕೋ ಹಂಗ್ ಎಂಬವ ರಸವಿದ್ಯೆಯ ಮೇಲೆ ಅನೇಕ ಗ್ರಂಥಗಳನ್ನು ಬರೆದಿದ್ದನೆಂದು ತಿಳಿದುಬಂದಿದೆ. ರಸವಿದ್ಯೆ ಮತ್ತು ದರ್ಶನಶಾಸ್ತ್ರಕ್ಕೆ ಸಂಬಂಧವುಂಟಾದುದರ ಬಗ್ಗೆ ತಾಯಿಸಮ್ ಸಿದ್ಧಾಂತ ತಿಳಿಯಪಡಿಸುತ್ತದೆ.

	ರಸವಿದ್ಯೆ ಈಜಿಪ್ಟ್, ಮೆಸೊಪೊಟೇಮಿಯ ಅಥವಾ ಭಾರತದ ಮೂಲಕ ಚೀನದಲ್ಲಿ ಹಬ್ಬಿತೆಂಬ ಅಭಿಪ್ರಾಯವೂ ಇದೆ. ಚೀನೀಯರು ಅರಬ್ ದೇಶದೊಡನೆ ಇಟ್ಟುಕೊಂಡ ವಾಣಿಜ್ಯ ಸಂಬಂಧದಿಂದ ಈ ರಸವಿದ್ಯೆ ಚೀನದ ತಾಯಿಸಮ್ ದರ್ಶನ ಸಿದ್ಧಾಂತದಿಂದ ಹುಟ್ಟಿ ಪಶ್ಚಿಮ ದೇಶಗಳಲ್ಲಿ ಪ್ರಚಾರಗೊಂಡಿತೆಂಬುದು ಕೆಲವರ ಅಭಿಪ್ರಾಯ. ಚೀನೀಯರು ಬಲು ಪುರಾತನ ಕಾಲದಿಂದಲೇ ಜೀವನಾಮೃತವನ್ನು ಶೋಧಿಸಲು ಪ್ರಯತ್ನ ಮಾಡಿದ್ದರು. ಇಂಥ ಅಮೃತದ ಶೋಧನೆಯ ವಿಚಾರ ಭಾರತದಲ್ಲಿ ಕ್ರಿ. ಶ. 10 ನೆಯ ಶತಮಾನದಲ್ಲಿ ಪ್ರಬಲವಾಗಿತ್ತು. ಭಾರತದ ರಸವಾದಿಗಳಲ್ಲಿ ನಾಗಾರ್ಜುನನ ಹೆಸರು ಪ್ರಖ್ಯಾತವಾದ್ದು. ಇಸ್ಲಾಮಿನ ಅರಬ್ಬೀ ಭಾಷೆಯಲ್ಲಿಯ ಗ್ರಂಥಗಳು ಲ್ಯಾಟಿನ್ ಭಾಷೆಗೆ ಭಾಷಾಂತರಗೊಂಡು ತನ್ಮೂಲಕ ಪಾಶ್ಚಾತ್ಯ ದೇಶಗಳಲ್ಲಿ ರಸವಿದ್ಯೆ ಪ್ರಚಾರಗೊಂಡಿತೆಂದೂ ತಿಳಿದುಬಂದಿದೆ. ಆಲ್ಬರ್ಟಸ್ ಮ್ಯಾಗ್ನಸ್ (1193 - 1260) ಮತ್ತು ರೋಜರ್ ಬೇಕನ್ (1214 - 92) ಎಂಬವರು ರಸವಿದ್ಯೆಯ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದ್ದರು. ಹದಿನೈದನೆಯ ಶತಮಾನದ ಕೊನೆಯ ತನಕವೂ ಪಾಶ್ಚಾತ್ಯ ದೇಶಗಳಲ್ಲಿ ರಸವಿದ್ಯೆಯ ಮೇಲೆ ಅನೇಕ ಗ್ರಂಥಗಳು ರಚನೆಗೊಂಡವು.

	ಪ್ರಾಚೀನ ಕಾಲದ ಅರಬ್ಬರಲ್ಲಿ ರಸವಿದ್ಯೆ ಬಲು ಪ್ರಚಾರದಲ್ಲಿತ್ತು. ಅರಬ್ ದೇಶದ ರಸಾಯನಶಾಸ್ತ್ರಜ್ಞರ ಪೈಕಿ ಗೆಬರ್ ಎಂಬವನ ಹೆಸರು ಪ್ರಖ್ಯಾತವಾದ್ದು. ಅಮೃತ ಮತ್ತು ಸ್ಪರ್ಶಶಿಲೆಗಳನ್ನು ಪಡೆಯಲು ಅರಬ್ಬರು ಅಸಾಧಾರಣ ಪ್ರಯತ್ನಪಟ್ಟಿದ್ದರು ಮಾತ್ರವಲ್ಲದೆ ಅನೇಕ ಪ್ರಯೋಗಗಳನ್ನು ನಡೆಸಿದ್ದರು ಕೂಡ. ರಸಾಯನಶಾಸ್ತ್ರವೆಂದರೆ ಲೋಹಪರಿವರ್ತನೆಯ ಶಾಸ್ತ್ರ ಎಂಬಷ್ಟರ ಮಟ್ಟಿಗೆ ಅವರು ಈ ವಿಷಯವನ್ನು ಪ್ರಚಾರದಲ್ಲಿ ತಂದಿದ್ದರು. ಆದರೆ ತಪ್ಪು ಸಿದ್ಧಾಂತ, ತಪ್ಪು ತಿಳಿವಳಿಕೆ ಮತ್ತು ತಪ್ಪು ಆಚಾರಗಳಿಂದ ರಸವಿದ್ಯೆ ಮಾಂತ್ರಿಕ ವಿದ್ಯೆ, ಜಾರು ವಿದ್ಯೆಯೆಂಬ ಅಪಖ್ಯಾತಿಗೆ ಈಡಾಯಿತು. ಇವರಲ್ಲಿ ಕೆಲವರು ಅಂಧಶ್ರದ್ಧೆ ಇದ್ದವರನ್ನು ಮೋಸ ಪಡಿಸಲು ಹಿಂಜರಿಯುತ್ತಿರಲಿಲ್ಲ. ಗೋಪ್ಯವಾಗಿ ಪ್ರಯೋಗಗಳನ್ನು ನಡೆಸುವುದು, ಜನರಿಗೆ ಮೋಸ ಮಾಡುವುದು ಇವುಗಳ ದೆಸೆಯಿಂದ ರಸಾಯನ ಪ್ರಯೋಗಗಳಿಗೆ ಆ ಕಾಲದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಲಿಲ್ಲ. ರಸವಿದ್ಯೆಯನ್ನು ಬಲ್ಲವರಿಗೆ ಸಮಾಜದಲ್ಲಿ ಮಾನ್ಯತೆ ಇರಲಿಲ್ಲ. ಕೆಲವೊಂದು ದೇಶಗಳಲ್ಲಿ ರಸವಾದಿಗಳನ್ನು ಮಾಟಗಾರರೆಂದೇ ಭಾವಿಸಿ ಅವರನ್ನು ಗಲ್ಲಿಗೆ ಏರಿಸಿದ್ದೂ ಉಂಟು. ರಸವಾದಿಗಳಿಗೆ ತಮ್ಮ ಕಾರ್ಯದಲ್ಲಿ ಯಶಸ್ಸು ದೊರೆಯದೇ ಹೋದರೂ ಈ ದಿಶೆಯಲ್ಲಿ ಅವರು ನಡೆಸಿದ ಅನೇಕ ಪ್ರಯೋಗಗಳು ಅಪ್ರತ್ಯಕ್ಷವಾಗಿ ರಸಾಯನ ವಿಜ್ಞಾನದ ಬೆಳೆವಣಿಗೆಗೆ ಕಾರಣವಾದವು.

	ಇದೇ ಅವಧಿಯಲ್ಲಿ ಸಸ್ಯ ಮತ್ತು ಪ್ರಾಣಿ ಸಂಬಂಧವಾದ ಅನೇಕ ರಾಸಾಯನಿಕ ವಸ್ತುಗಳನ್ನು ರೋಗಗಳ ಚಿಕಿತ್ಸೆಯಲ್ಲಿ ಬಳಸುವುದೂ ರೂಢಿಗೆ ಬಂತು. ಇವುಗಳ ಬಳಕೆ ಹೆಚ್ಚಿದಂತೆಲ್ಲ ಎಲ್ಲ ರೋಗಗಳನ್ನು ಗುಣಪಡಿಸುವ ರಾಸಾಯನಿಕ ವಸ್ತು ಸಹ ಇರಬಹುದೆಂಬ ಭಾವನೆ ಕೆಲವರಲ್ಲಿ ಮೂಡಿತ್ತು. ಪ್ಯಾರಸೆಲ್ಸಸ್ ಎಂಬಾತ ಅನೇಕ ರಾಸಾಯನಿಕ ವಸ್ತುಗಳನ್ನು ಔಷಧವಾಗಿ ಉಪಯೋಗಿಸಬಹುದು ಎಂಬುದನ್ನು ವೇದ್ಯ ಮಾಡಿಕೊಂಡಿದ್ದ. ಅನಂತರ ಅನೇಕ ಔಷಧಿಗಳು ಆವಿಷ್ಕಾರಗೊಂಡು ಉಪಯೋಗದಲ್ಲೂ ಬಂದವು, ಕಾಲಕ್ರಮೇಣ ಪ್ರಯೋಗಕಾರರ ಧ್ಯೇಯ ಬದಲಾಯಿಸಿತು. ಲೋಹ ಪರಿವರ್ತನೆಯೂ ಅಮೃತಶೋಧನೆಯೂ ಬಿಸಿಲುಗುದುರೆಯೆಂಬುದನ್ನು ಜನ ಮನಗಂಡರು. ಸುಮಾರು 18ನೆಯ ಶತಮಾನದ ಹೊತ್ತಿಗೆ ಸತ್ಯಶೋಧನೆಯ ಕಡೆಗೆ ರಸಾಯನವಿಜ್ಞಾನಿಗಳ ಗಮನ ಹರಿಯಿತು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
					
(ವಿ.ಯು.)